ಮನೋಹರ್ ಪಿರೇರಾ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದಲ್ಲಿ ಬಂಧಿಸಲ್ಪಟ್ಟಿರುವ ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ವಿರುದ್ಧ ಕಠಿಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಕ್ರೈಸ್ತ ಸಮುದಾಯದ 155 ಮಂದಿ ತಮ್ಮ ಹೆಸರು, ಮೊಬೈಲ್ ಸಂಖ್ಯೆ ಮತ್ತು ಸಹಿಯನ್ನು ಹಾಕಿ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ಗೆ ಮನವಿ ಮಾಡಿದ್ದಾರೆ
ಅನಿಲ್ ಲೋಬೊ ಹಲವರಿಗೆ ಅನ್ಯಾಯ ಮಾಡಿದ್ದಾರೆ. ಮುಗ್ಧ ಮನೋಹರ್ ಪಿರೇರಾ ಸಾವಿಗೆ ನ್ಯಾಯ ನೀಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದು, ಇದರ ಪ್ರತಿಯನ್ನು ಮುಖ್ಯಮಂತ್ರಿ, ಗೃಹ ಸಚಿವರು, ಸಹಕಾರಿ ಸಚಿವರು, ಜಿಲ್ಲಾಧಿಕಾರಿ ಮತ್ತು ಸ್ಪೀಕರ್ ಯುಟಿ ಖಾದರ್ ಗೂ ರವಾನಿಸಿದ್ದಾರೆ. ದ.ಕ. ಜಿಲ್ಲಾ ಸೆಶನ್ಸ್ ನ್ಯಾಯಾಲಯದಲ್ಲಿ ಡಿ.27ರಂದು ನಿಗದಿಯಾಗಿದ್ದ ಜಾಮೀನು ಅರ್ಜಿಯು ಸರಕಾರಿ ರಜೆ ಘೋಷಣೆಯಾದ ಕಾರಣ ಮುಂದೂಡಿಕೆಯಾಗಿದೆ. ಡಿ.30ರಂದು ಅರ್ಜಿ ವಿಚಾರಣೆಗೆ ಬರಲಿದೆ.
ಡಿ.18ರಂದು ಅನಿಲ್ ಲೋಬೊನನ್ನು ಕಂಕನಾಡಿ ಗ್ರಾಮಾಂತರ ಪೊಲೀಸರು ಬಂಧಿಸಿದ್ದರು. ಅನಿಲ್ ಲೋಬೊ ಅವರಿಗೆ ಜಿಲ್ಲಾ ಕೋರ್ಟ್ ಡಿ.30ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಈ ನಡುವೆ, ಡಿ.19ರಂದು ಲೋಬೊ ಪರ ವಕೀಲರು ಕೋರ್ಟಿನಲ್ಲಿ ವಾದ ಮಂಡಿಸಿ ಆತನಿಗೆ ಅನಾರೋಗ್ಯ ಕಾಡುತ್ತಿರುವುದಾಗಿ ಹೇಳಿ, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಅನುಮತಿ ನೀಡಬೇಕೆಂದು ಕೇಳಿಕೊಂಡಿದ್ದರು. ಅದರಂತೆ, ಕೋರ್ಟ್ ಚಿಕಿತ್ಸೆಗೆ ಅನುಮತಿ ನೀಡಿದ್ದು, ಡಿ.19ರ ರಾತ್ರಿ ಜೈಲಿನಿಂದ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಡಿ.17ರಂದು ಉಳಾಯಿಬೆಟ್ಟು ಬಳಿಯ ಫೆರ್ಮಾಯಿ ನಿವಾಸಿ ಮನೋಹರ್ ಪಿರೇರಾ(47) ಎಂಬ ಅಂಗವಿಕಲ ವ್ಯಕ್ತಿ ತನ್ನ ಸಾವಿಗೆ ಅನಿಲ್ ಲೋಬೊ ಕಾರಣ ಎಂದು ಹೇಳಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಬ್ಯಾಂಕ್ ಸಾಲದ ವಿಚಾರದಲ್ಲಿ ಅನಿಲ್ ಲೋಬೊ ತನ್ನ ಮೇಲೆ ಕಿರುಕುಳ ನೀಡಿದ್ದಾಗಿ ಆರೋಪಿಸಿದ್ದರು. ಈ ಬಗ್ಗೆ ಕಂಕನಾಡಿ ಗ್ರಾಮಾಂತರ ಠಾಣೆ ಪೊಲೀಸರು ಅನಿಲ್ ಲೋಬೊ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆಯೆಂದು ಕೇಸು ದಾಖಲಿಸಿದ್ದರು.