ಮಂಗಳೂರು: ಬ್ಯಾಂಕ್ ಕಿರುಕುಳದಿಂದ ಮನೋಹರ್ ಪಿರೇರಾ ಆತ್ಮಹತ್ಯೆ, ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅರೆಸ್ಟ್
ದಕ್ಷಿಣ ಕನ್ನಡದ ಫೆರ್ಮಾಯಿಯಲ್ಲಿ ಮನೋಹರ್ ಪಿರೇರಾ (46) ಎಂಬವರು ಬ್ಯಾಂಕ್ ಕಿರುಕುಳದಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಸಂಬಂಧ ಮೃತನ ಸಹೋದರ ಮಂಗಳೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ತನ್ನ ಹಿರಿಯ ಸಹೋದರ ಮೆಲ್ಬರ್ನ್ ಪಿರೇರಾ ಅವರೊಂದಿಗೆ ವಾಸಿಸುತ್ತಿದ್ದ ಮನೋಹರ್ ಆರ್ಥಿಕ ಮುಗ್ಗಟ್ಟಿನಿಂದಾಗಿ ಸಾಲದ ಕಂತುಗಳನ್ನು ಪಾವತಿಸಲು ಸಾಧ್ಯವಾಗಿರಲಿಲ್ಲ. ನಂತರ ಎರಡು ವರ್ಷಗಳ ಹಿಂದೆ ಬ್ಯಾಂಕ್ ಮನೆಯನ್ನು ವಶಪಡಿಸಿಕೊಂಡಿತು. ಇದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಮನೋಹರ್ ಗೆ ಎರಡು ಬಾರಿ ಹೃದಯಾಘಾತವಾಗಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆತ್ಮಹತ್ಯೆಗೆ ಮುನ್ನ ವೀಡಿಯೋದಲ್ಲಿ, ಮನೋಹರ್ ಅವರು, “ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ನನ್ನ ಸಾವಿಗೆ ಹೊಣೆ,” ಎಂದು ಹೇಳಿದ್ದಾರೆ. ಅವರ ದೆತ್ ನೋಟ್ ಪ್ರಕಾರ, ಮನೋಹರ್ ಅವರು 10 ವರ್ಷಗಳ ಹಿಂದೆ ಎಂಸಿಸಿ ಬ್ಯಾಂಕ್ನಿಂದ ಗೃಹಸಾಲ ಪಡೆದು ಮನೆ ಖರೀದಿಸಿದ್ದರು. ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಆರ್ಥಿಕ ಸಂಕಷ್ಟದಿಂದ ಸಾಲದ ಕಂತುಗಳನ್ನು ಪಾವತಿಸಲು ಸಾಧ್ಯವಾಗದೆ, ಬ್ಯಾಂಕ್ ಎರಡು ವರ್ಷಗಳ ಹಿಂದೆ ಅವರ ಮನೆಯನ್ನು ಜಪ್ತಿ ಮಾಡಿತ್ತು. ನಂತರ, ಅವರ ಅತ್ತೆ ಸಿಸ್ಟರ್ ಕ್ರಿಸ್ಟಿನ್ ಅವರ ಸಹಾಯದಿಂದ ರೂ.15 ಲಕ್ಷವನ್ನು ಮನೋಹರ್ ಅವರ ಖಾತೆಗೆ ಜಮಾ ಮಾಡಲಾಗಿತ್ತು. ಆದರೆ, ಲೋಬೊ ಅವರು ಸೆಲ್ಫ್ ಚೆಕ್ ಬಳಸಿ ರೂ.9 ಲಕ್ಷವನ್ನು ಮನೋಹರ್ ಅವರ ಖಾತೆಯಿಂದ ಡ್ರಾ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಆತ್ಮಹತ್ಯೆಗೆ ಮೊದಲು ಮನೋಹರ್ ಅವರು ವಿಡಿಯೋ ಮಾಡಿ, ತಮ್ಮ ಸಾವಿಗೆ ಲೋಬೊ ಕಾರಣವೆಂದು ಆರೋಪಿಸಿದ್ದರು. ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದು ಪ್ರಕರಣಕ್ಕೆ ಹೆಚ್ಚಿನ ಗಮನ ಸೆಳೆದಿದೆ.
ಈ ಘಟನೆಗೆ ಸಂಬಂಧಿಸಿದಂತೆ ಅನಿಲ್ ಲೋಬೊ ಅವರನ್ನು ಕಂಕನಾಡಿ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ರಾಜಕೀಯ ಪ್ರಭಾವವೂ ಕಾರಣವಾಗಿದೆ ಎಂದು ಹೇಳಲಾಗಿದ್ದು, ಮನೋಹರ್ ಅವರು ಹೃದಯ ಕಾಯಿಲೆ ಮತ್ತು ಪಾರಾಲಿಸಿಸ್ನಿಂದಲೂ ಬಳಲುತ್ತಿದ್ದರು.
ಈ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನಾನಾ ಚರ್ಚೆಗೆ ಕಾರಣವಾಗಿದೆ