2025 ರ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್‌ಗಳ ಪಟ್ಟಿಯನ್ನು ಹೆನ್ಲಿ ಸಂಸ್ಥೆ ಬಿಡುಗಡೆ ಮಾಡಿದೆ. ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕ, ಇಂಟರ್‌ನ್ಯಾಶನಲ್ ಟ್ರಾನ್ಸ್‌ಪೋರ್ಟ್ ಅಸೋಸಿಯೇಷನ್ (IATA) ಡೇಟಾವನ್ನು ಆಧರಿಸಿ, ಪಾಸ್‌ಪೋರ್ಟ್ ಹೊಂದಿರುವವರು ಪೂರ್ವ ವೀಸಾ ಇಲ್ಲದೆ ಎಷ್ಟು ದೇಶಗಳಿಗೆ ಪ್ರವಾಸ ಮಾಡಬಹುದು ಎಂಬುದನ್ನು ಅಳೆಯುತ್ತದೆ. ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕದ ಇತ್ತೀಚಿನ ವರದಿ ಪ್ರಕಾರ, ಸಿಂಗಾಪುರ್ ಪಾಸ್‌ಪೋರ್ಟ್ ಹೊಂದಿರುವವರು ವೀಸಾ ಮುಕ್ತವಾಗಿ 195 ಸ್ಥಳಗಳಿಗೆ ಭೇಟಿ ನೀಡುವ ಅವಕಾಶವನ್ನು ಪಡೆಯುತ್ತಾರೆ. 193 ದೇಶಗಳಿಗೆ ವೀಸಾ ಮುಕ್ತ ಪ್ರವಾಸವನ್ನು ಖಚಿತಪಡಿಸುವ ಜಪಾನ್ ಪಾಸ್‌ಪೋರ್ಟ್, ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. 192 ದೇಶಗಳಿಗೆ ವೀಸಾ ಮುಕ್ತ ಪ್ರವಾಸ ನೀಡುವ ಫಿನ್‌ಲ್ಯಾಂಡ್, ಫ್ರಾನ್ಸ್, ಜರ್ಮನಿ, ಇಟಲಿ, ಸ್ಪೇನ್ ಮತ್ತು ದಕ್ಷಿಣ ಕೊರಿಯಾ ಪಾಸ್‌ಪೋರ್ಟ್‌ಗಳು ಮೂರನೇ ಸ್ಥಾನದಲ್ಲಿವೆ.
ಕಳೆದ ವರ್ಷಕ್ಕೆ ಹೋಲಿಸಿದರೆ, ಫ್ರಾನ್ಸ್, ಜರ್ಮನಿ, ಇಟಲಿ ಮತ್ತು ಸ್ಪೇನ್ ಪಟ್ಟಿಯಲ್ಲಿ ಕುಸಿದಿವೆ. ಆಸ್ಟ್ರಿಯಾ, ಡೆನ್ಮಾರ್ಕ್, ಐರ್ಲೆಂಡ್, ಲಕ್ಸೆಂಬರ್ಗ್, ನೆದರ್ಲ್ಯಾಂಡ್ಸ್, ನಾರ್ವೆ ಮತ್ತು ಸ್ವೀಡನ್ ಪಾಸ್‌ಪೋರ್ಟ್‌ಗಳು 191 ದೇಶಗಳಿಗೆ ಪೂರ್ವ ವೀಸಾ ಇಲ್ಲದೆ ಪ್ರವಾಸ ಮಾಡುವ ಅವಕಾಶವನ್ನು ಪಡೆದಿವೆ. ಈ ಏಳು ಯುರೋಪಿಯನ್ ಯೂನಿಯನ್ (EU) ದೇಶಗಳು ನಾಲ್ಕನೇ ಸ್ಥಾನದಲ್ಲಿ ಸ್ಥಾನ ಗಿಟ್ಟಿಸಿವೆ
ಈ ವರ್ಷ, ಬ್ರಿಟನ್ ಐದನೇ ಸ್ಥಾನಕ್ಕೇರಿದ್ದು, ಬೆಲ್ಜಿಯಂ, ನ್ಯೂಜಿಲೆಂಡ್, ಸ್ವಿಟ್ಜರ್ಲೆಂಡ್ ಮತ್ತು ಪೋರ್ಚುಗಲ್ ಪಾಸ್‌ಪೋರ್ಟ್ ಹೊಂದಿರುವ ನಾಗರಿಕರು 190 ಸ್ಥಳಗಳಿಗೆ ವೀಸಾ ಮುಕ್ತ ಪ್ರವಾಸ ಮಾಡಬಹುದಾಗಿದೆ
ಅಮೆರಿಕ ಪಾಸ್‌ಪೋರ್ಟ್, ಕಳೆದ ವರ್ಷ ಏಳನೇ ಸ್ಥಾನದಲ್ಲಿದ್ದು, ಈ ವರ್ಷ ಒಂಬತ್ತನೇ ಸ್ಥಾನಕ್ಕೆ ಕುಸಿದಿದೆ. ಅಮೆರಿಕ ಪಾಸ್‌ಪೋರ್ಟ್ ಹೊಂದಿರುವವರು 186 ದೇಶಗಳಿಗೆ ವೀಸಾ ಮುಕ್ತವಾಗಿ ಪ್ರವಾಸ ಮಾಡಬಹುದು. 2014ರಲ್ಲಿ ಯುನೈಟೆಡ್ ಸ್ಟೇಟ್ಸ್ ಅಗ್ರ ಸ್ಥಾನದಲ್ಲಿತ್ತು. ಕೆನಡಾ, ಕಳೆದ ದಶಕದಲ್ಲಿ ಮೂರು ಸ್ಥಾನಗಳನ್ನು ಕಳೆದುಕೊಂಡು ಏಳನೇ ಸ್ಥಾನಕ್ಕೆ ಬಂದಿದ್ದು, ಆಸ್ಟ್ರೇಲಿಯಾ ಕಳೆದ ವರ್ಷದಂತೆ ಈ ವರ್ಷವೂ ಆರನೇ ಸ್ಥಾನವನ್ನು ಉಳಿಸಿಕೊಂಡಿದೆ. ಆಸ್ಟ್ರೇಲಿಯಾ ಪಾಸ್‌ಪೋರ್ಟ್ ಹೊಂದಿರುವವರು 189 ದೇಶಗಳಿಗೆ ವೀಸಾ ಮುಕ್ತ ಪ್ರವಾಸ ಮಾಡಬಹುದು.
ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ), ಕಳೆದ ಹತ್ತು ವರ್ಷಗಳಲ್ಲಿ ಭಾರಿ ಪ್ರಗತಿ ಸಾಧಿಸಿದೆ. 2015ರಲ್ಲಿ 113 ದೇಶಗಳಿಗೆ ವೀಸಾ ಮುಕ್ತ ಪ್ರವಾಸ ನೀಡಿದ ಯುಎಇ ಪಾಸ್‌ಪೋರ್ಟ್, ಈಗ 185 ದೇಶಗಳಿಗೆ ಪ್ರವಾಸಕ್ಕೆ ಅವಕಾಶ ಮಾಡಿಕೊಡುತ್ತದೆ. ಇದು 10ನೇ ಸ್ಥಾನವನ್ನು ಪಡೆದುಕೊಂಡಿದೆ. ಭಾರತ, 57 ದೇಶಗಳಿಗೆ ವೀಸಾ ಮುಕ್ತ ಪ್ರವಾಸ ನೀಡುವ ಸಾಮರ್ಥ್ಯದೊಂದಿಗೆ 85ನೇ ಸ್ಥಾನದಲ್ಲಿದೆ. ಪಾಕಿಸ್ತಾನ 33 ದೇಶಗಳಿಗೆ ವೀಸಾ ಮುಕ್ತ ಪ್ರವಾಸ ನೀಡುವ ಸಾಮರ್ಥ್ಯದೊಂದಿಗೆ 104ನೇ ಸ್ಥಾನದಲ್ಲಿದ್ದು, ಪಟ್ಟಿಯ ಕೊನೆಯ ಸ್ಥಾನ ಅಫ್ಘಾನಿಸ್ತಾನದ್ದು.
ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕದ 19 ವರ್ಷಗಳ ಇತಿಹಾಸದಲ್ಲಿ, ಅಗ್ರ ಮತ್ತು ಪಟ್ಟಿಯ ಕೊನೆಯ ಸ್ಥಾನದ ರಾಷ್ಟ್ರಗಳ ನಡುವೆ ವೀಸಾ ಮುಕ್ತ ಪ್ರವಾಸದ ಕ್ಷೇತ್ರದಲ್ಲಿ ಇಷ್ಟು ದೊಡ್ಡ ವ್ಯತ್ಯಾಸ ಮೊದಲ ಬಾರಿಗೆ ಕಂಡುಬಂದಿದೆ.