ಬೀಜಿಂಗ್: ಕೋವಿಡ್ 19 ನೆನಪು ಇನ್ನೂ ಮಾಸುವ ಮುನ್ನವೇ ಚೀನಾದಲ್ಲಿ ಮತ್ತೊಂದು ಹೊಸ ವೈರಸ್ ಹಬ್ಬುವ ಸಂಭವದ ವರದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ. ಹ್ಯೂಮನ್ ಮೆಟಾಪ್ನ್ಯೂಮೋವೈರಸ್ (ಎಚ್.ಎಂ.ಪಿ.ವಿ) ಎಂಬ ಹೊಸ ವೈರಸ್ ಚೀನಾದ ವಿವಿಧ ರಾಜ್ಯಗಳಲ್ಲಿ ಕಾಣಿಸಿಕೊಂಡಿದ್ದು, ಶ್ವಾಸಕೋಶದ ಮೇಲೆ ಪ್ರಭಾವ ಬೀರುತ್ತಿದೆ ಎಂಬ ಮಾಹಿತಿಯಾಗಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ವೀಡಿಯೋಗಳಲ್ಲಿ ಆಸ್ಪತ್ರೆಗಳು ರೋಗಿಗಳಿಂದ ತುಂಬಿಹೋಗಿರುವುದು ಕಂಡುಬರುತ್ತಿದೆ. ಅನೇಕ ಮಂದಿ ಮೃತಪಟ್ಟಿದ್ದಾರೆ ಎಂಬ ವರದಿಗಳು ಅಂತರಾಷ್ಟ್ರೀಯ ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಇದರ ಜತೆಗೆ ಇನ್ಫ್ಲುಯೆಂಜಾ, ಹ್ಯೂಮನ್ ಮೆಟಾಪ್ನ್ಯೂಮೋವೈರಸ್, ಕೋವಿಡ್-19 ಸೇರಿದಂತೆ ಹಲವಾರು ವೈರಸ್‌ಗಳು ಚೀನಾದಲ್ಲಿ ಹರಡುತ್ತಿವೆ.
ವೈರಸ್ ಲಕ್ಷಣಗಳು ಮತ್ತು ಹಿನ್ನಲೆ: ಎಚ್.ಎಂ.ಪಿ.ವಿ. ಹೆಚ್ಚಿನವಾಗಿ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಕಂಡುಬರುತ್ತಿದ್ದು, ವಯಸ್ಸಾದವರು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವವರು ಹೆಚ್ಚಿನ ಅಪಾಯಕ್ಕೆ ಒಳಗಾಗುವ ಸಾಧ್ಯತೆಯಿದೆ. ಕೆಮ್ಮು, ಜ್ವರ, ಶ್ವಾಸಕೋಶ ಸಮಸ್ಯೆ, ಮತ್ತು ಸೀನುವುದು ಈ ವೈರಸ್‌ನ ಪ್ರಮುಖ ಲಕ್ಷಣಗಳಾಗಿವೆ.
ಚೀನಾದ ಕೆಲವು ಪ್ರದೇಶಗಳಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ ಎಂಬ ವರದಿಗಳು ಕೂಡ ಬಂದಿವೆ. ಆದರೆ ಚೀನಾ ಸರ್ಕಾರ ಅಥವಾ ವಿಶ್ವ ಆರೋಗ್ಯ ಸಂಸ್ಥೆ ಈ ವರದಿಗಳನ್ನು ಇನ್ನೂ ದೃಢಪಡಿಸಿಲ್ಲ. 2001 ರಲ್ಲಿ ಎಚ್.ಎಂ.ಪಿ.ವಿ. ಅನ್ನು ಮೊದಲ ಬಾರಿಗೆ ಗುರುತಿಸಲಾಯಿತು. ಈ ವೈರಸ್‌ಗೆ ಯಾವುದೇ ನಿರ್ದಿಷ್ಟ ಚಿಕಿತ್ಸೆ ಅಥವಾ ಲಸಿಕೆ ಇಲ್ಲ ಎಂದು ತಜ್ಞರು ಹೇಳುತ್ತಾರೆ.