ಬೆಂಗಳೂರು: ವಿದೇಶ ಪ್ರಯಾಣದ ಆಸಕ್ತಿ ಹೆಚ್ಚುತ್ತಿರುವ ಕಾರಣ, ಕರ್ನಾಟಕದಲ್ಲಿ ಪಾಸ್ಪೋರ್ಟ್ ಅರ್ಜಿಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. 2024ರಲ್ಲಿ ದಾಖಲೆ ಮಟ್ಟದ 8,83,755 ಪಾಸ್ಪೋರ್ಟ್‌ಗಳನ್ನು ಮಂಜೂರು ಮಾಡಲಾಗಿದೆ, ಇದು ಈವರೆಗೆ ನೀಡಿದ ಗರಿಷ್ಠ ಸಂಖ್ಯೆಯಾಗಿದೆ.

2023ರಲ್ಲಿ 34,000 ಪಾಸ್ಪೋರ್ಟ್‌ಗಳನ್ನು ಮಂಜೂರು ಮಾಡಲಾಗಿತ್ತು, ಅದುವರೆಗೆ ಇದೇ ಗರಿಷ್ಠ ದಾಖಲೆ ಆಗಿತ್ತು. ಈ ಮಾಹಿತಿಯನ್ನು ಬೆಂಗಳೂರಿನ ಪ್ರಾದೇಶಿಕ ಪಾಸ್ಪೋರ್ಟ್ ಅಧಿಕಾರಿಯಾದ ಕೃಷ್ಣ ಕೆ. ಅವರು ಹಂಚಿಕೊಂಡಿದ್ದಾರೆ. ಅವರು ಈ ಕುರಿತು ಹೇಳಿಕೆ ನೀಡುತ್ತಾ, “ರಾಜ್ಯದಲ್ಲಿ ಒಟ್ಟು 23 ಪೋಸ್ಟ್ ಆಫೀಸ್ ಪಾಸ್ಪೋರ್ಟ್ ಸೇವಾ ಕೇಂದ್ರಗಳಿವೆ. ಕೋವಿಡ್-19ನ ನಂತರ ಪಾಸ್ಪೋರ್ಟ್‌ಗಾಗಿ ಅರ್ಜಿ ಸಲ್ಲಿಸುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಪ್ರತಿದಿನ 700-800 ಹೊಸ ಅರ್ಜಿಗಳನ್ನು ನಾವು ಸ್ವೀಕರಿಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.
ಕೋವಿಡ್ ನಂತರ ವಿದೇಶ ಪ್ರವಾಸ ವೇಗ ಪಡೆದಿದ್ದು, ಉದ್ಯೋಗ, ಶಿಕ್ಷಣ ಮತ್ತು ಪ್ರವಾಸೋದ್ಯಮಕ್ಕಾಗಿ ಸಾವಿರಾರು ಜನರು ಪಾಸ್ಪೋರ್ಟ್ ಪಡೆಯುತ್ತಿದ್ದಾರೆ. 2024ರಲ್ಲಿ ಒಟ್ಟು 4,88,509 ಪುರುಷರು, 3,95,236 ಮಹಿಳೆಯರು ಮತ್ತು 10 ಟ್ರಾನ್ಸ್‌ಜೆಂಡರ್ ವ್ಯಕ್ತಿಗಳು ಪಾಸ್ಪೋರ್ಟ್ ಪಡೆದಿದ್ದಾರೆ.

2024ರಲ್ಲಿ ಪಾಸ್ಪೋರ್ಟ್ ಪಡೆದವರ ಪೈಕಿ ಒಬ್ಬರು 100 ವರ್ಷದವರಾಗಿದ್ದು, 96-99 ವಯೋಮಾನದ 8 ಜನರು ಮತ್ತು 76-95 ವಯೋಮಾನದ 8,668 ಜನರು ತಮ್ಮ ಪಾಸ್ಪೋರ್ಟ್ ಪಡೆದಿದ್ದಾರೆ. 16-35 ವರ್ಷದ 3,88,453 ಜನರಿಗೆ ಪಾಸ್ಪೋರ್ಟ್ ನೀಡಲಾಗಿದೆ. ವಿಶೇಷವಾಗಿ, 2024ರ ಫೆಬ್ರವರಿ ತಿಂಗಳಲ್ಲಿ 78,416 ಪಾಸ್ಪೋರ್ಟ್‌ಗಳನ್ನು ಮಂಜೂರು ಮಾಡಲಾಗಿದ್ದು, ಇದು ತಿಂಗಳಿಗೇ ಗರಿಷ್ಠ ದಾಖಲೆ!
ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರಗಳ ವಿತರಣೆಯೂ ಹೆಚ್ಚಳ: ಪಾಸ್ಪೋರ್ಟ್ ಮಂಜೂರಾತಿಯೊಂದಿಗೆ, ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ (PCC)ಗಳ ವಿತರಣೆಯೂ ಹೆಚ್ಚಾಗಿದೆ. ಉದ್ಯೋಗಕ್ಕಾಗಿ ಕೆಲವೊಂದು ದೇಶಗಳಿಗೆ PCC ಕಡ್ಡಾಯ. 2024ರಲ್ಲಿ 7,284 PCCಗಳು ಕುವೈಟ್‌ಗೆ, 2,712 ಆಸ್ಟ್ರೇಲಿಯಾಗೆ ,ಇಸ್ರೇಲ್ ಮತ್ತು ಹಲವಾರು ದೇಶಗಳಿಗೆ PCC ಮಂಜೂರು ಮಾಡಲಾಗಿದೆ.
