ತಿರುವನಂತಪುರಂ: ಕೇರಳ ರಾಜ್ಯದಿಂದ ಅಂತರಾಷ್ಟ್ರೀಯ ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಖಾತರಿಪಡಿಸಲು ಹಾಗೂ ಸುರಕ್ಷಿತ ವಲಸೆಗೆ ಅನುಕೂಲವಾಗುವಂತೆ ವಿಶೇಷ ಕಾನೂನು ರೂಪಿಸುವ ಸಾಧ್ಯತೆಯನ್ನು ಅಧ್ಯಯನ ಮಾಡಲು ಕೇರಳ ಸರ್ಕಾರ 10 ಸದಸ್ಯರ ಸಮಿತಿಯನ್ನು ರಚಿಸಿದೆ. ಅನಧಿಕೃತ ನೇಮಕಾತಿ ಏಜೆಂಟ್ಗಳ ಬಲೆಗೆ ಸಿಲುಕುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಈ ಸಮಿತಿಯು ವಿದೇಶಿ ಉದ್ಯೋಗಗಳಿಗೆ ರಾಜ್ಯದ ಯುವಕರನ್ನು ತರಬೇತುಗೊಳಿಸುವ ಮತ್ತು ನೇಮಕಾತಿ ಪ್ರಕ್ರಿಯೆ ಸುಗಮಗೊಳಿಸುವ ಮಾರ್ಗಗಳನ್ನು ಅಧ್ಯಯನ ಮಾಡಲಿದೆ.


ಮುಖ್ಯಮಂತ್ರಿ ಪಿನರಾಯಿ ವಿಜಯನ್ ಅವರ ನೇತೃತ್ವದ ಸರ್ಕಾರವು ಈ ಹೊಸ ಹಂತವನ್ನು “ಯುವಜನರ ಸಾಮರ್ಥ್ಯವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಮತ್ತು ಬೇಡಿಕೆಯಿರುವ ದೇಶಗಳೊಂದಿಗೆ ಸಹಯೋಗವನ್ನು ಬಲಪಡಿಸುವ” ಪ್ರಯತ್ನ ಎಂದು ವಿವರಿಸಿದೆ. ಕೇರಳದಿಂದ ವಿದೇಶಗಳಿಗೆ ಕಾರ್ಮಿಕ ವಲಸೆ ಹೆಚ್ಚಳ, ರಾಜ್ಯದ ಆರ್ಥಿಕತೆಗೆ ಹಣಕಾಸಿನ ಹರಿವು (ರೆಮಿಟೆನ್ಸ್) ಗಣನೀಯವಾಗಿ ಸಹಾಯಕವಾಗಬಹುದು ಎಂದು ಸರ್ಕಾರ ನಂಬಿದೆ.
ಸಮಿತಿಯಲ್ಲಿ ನೋರ್ಕಾ (NORKA-ROOTS) ಯ ಸಚಿವಾಲಯದ ಪ್ರಧಾನ ಕಾರ್ಯದರ್ಶಿ, ಕಾರ್ಮಿಕ, ಶಿಕ್ಷಣ, ಮತ್ತು ಕೌಶಲ್ಯ ಅಭಿವೃದ್ಧಿ ಇಲಾಖೆಯ ಹಿರಿಯ ಅಧಿಕಾರಿಗಳು, ಉದ್ಯಮ ಪ್ರತಿನಿಧಿಗಳು ಮತ್ತು ವಲಸೆ ನೀತಿ ತಜ್ಞರು ಸೇರಿದ್ದಾರೆ.
