ಲಂಡನ್: ಬ್ರಿಟನ್ ಗೃಹ ಕಚೇರಿ ಅಕ್ರಮ ವಲಸೆ ವಿರುದ್ಧ ತನ್ನ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದು, ದೇಶದಾದ್ಯಂತ ವ್ಯಾಪಕ ಸ್ಥಳಗಳಲ್ಲಿ ದಾಳಿಗಳನ್ನು ನಡೆಸುತ್ತಿದೆ. ಇತ್ತೀಚಿನ ವರದಿಗಳ ಪ್ರಕಾರ, ಕಾರ್ಯಾಚರಣೆಯು ಲಂಡನ್, ಮ್ಯಾಂಚೆಸ್ಟರ್, ಬರ್ಮಿಂಘಮ್, ಗ್ಲಾಸ್ಗೋ ಮತ್ತು ಇನ್ನಿತರ ಪ್ರಮುಖ ನಗರಗಳಲ್ಲಿ ನೆಲೆಸಿರುವ ವಲಸೆಗಾರರನ್ನು ಗುರಿಯಾಗಿರಿಸಿಕೊಂಡಿದೆ.

ಇತ್ತೀಚೆಗೆ, ದೇಶಾದ್ಯಂತ ವ್ಯಾಪಕ ದಾಳಿಗಳನ್ನು ನಡೆಸಲಾಗಿದ್ದು, ಅಕ್ರಮವಾಗಿ ನೆಲೆಸಿರುವ ಹಲವಾರು ಜನರನ್ನು ಬಂಧಿಸಲಾಗಿದೆ. ಗೃಹ ಕಚೇರಿಯ ವಕ್ತಾರರ ಪ್ರಕಾರ, ಈ ದಾಳಿಗಳು ಅಕ್ರಮ ಉದ್ಯೋಗ ಮತ್ತು ವಲಸೆಯನ್ನು ಗುರಿಯಾಗಿರಿಸಿಕೊಂಡಿವೆ. “ಬ್ರಿಟನ್‌ನಲ್ಲಿ ಅಕ್ರಮವಾಗಿ ವಾಸಿಸುವವರನ್ನು ಪತ್ತೆಹಚ್ಚಿ ಗಡಿಪಾರು ಮಾಡುವುದು ಆದ್ಯತೆಯಾಗಿದೆ. ಈ ಕಾರ್ಯಾಚರಣೆ ಮುಖ್ಯವಾಗಿ ಹೋಟೆಲ್, ರೆಸ್ಟೋರೆಂಟ್, ಅಂಗಡಿ, ಗೋದಾಮುಗಳು, ನಿರ್ಮಾಣ ಸ್ಥಳಗಳು ಮತ್ತು ಕಚೇರಿಗಳಂತಹ ಉದ್ಯೋಗ ಕೇಂದ್ರಗಳಲ್ಲಿ ನಡೆದಿವೆ. ಗೃಹ ಕಚೇರಿಯ ಅಧಿಕಾರಿಗಳ ಪ್ರಕಾರ, ಅಕ್ರಮ ವಲಸಿಗರು ಅನಧಿಕೃತವಾಗಿ ಉದ್ಯೋಗ ಮಾಡುತ್ತಿರುವ ಮಾಹಿತಿ ಪಡೆದ ನಂತರ ಈ ದಾಳಿಗಳು ನಡೆಯಿತು. ಕೆಲವೆಡೆ ಉದ್ಯೋಗದಾತರು ಕೂಡಾ ವಿಚಾರಣೆಗೆ ಒಳಗಾಗಿದ್ದಾರೆ. ಬಂಧಿತರನ್ನು ಗಡಿಪಾರು ಮಾಡುವ ಪ್ರಕ್ರಿಯೆ ಪ್ರಾರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ

ಬಂಧಿತರನ್ನು ತಕ್ಷಣ ವಲಸೆ ನಿಯಂತ್ರಣ ಕೇಂದ್ರಗಳಿಗೆ ಕರೆದೊಯ್ಯಲಾಗಿದ್ದು, ಅವರ ಕಾನೂನುಬಾಹಿರ ವಾಸ ಹಾಗೂ ಉದ್ಯೋಗದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ದಾಖಲೆ ಇಲ್ಲದವರನ್ನು ಶೀಘ್ರದಲ್ಲೇ ತಮ್ಮ ಮೂಲ ದೇಶಗಳಿಗೆ ಹಿಂತಿರುಗಿಸಲಾಗುವುದು. ಕೆಲವರನ್ನು ತಾತ್ಕಾಲಿಕ ವಶಕ್ಕೆ ತೆಗೆದುಕೊಂಡಿದ್ದು, ಅವರ ಅರ್ಜಿಗಳನ್ನು ಪರಿಶೀಲಿಸಲಾಗುತ್ತಿದೆ.

.ಈ ಕ್ರಮವು ಬ್ರಿಟನ್‌ನಲ್ಲಿ ವಲಸೆ ನೀತಿಗಳ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ. ಕೆಲವರು ಸರ್ಕಾರದ ಕಠಿಣ ಕ್ರಮಗಳನ್ನು ಬೆಂಬಲಿಸಿದರೆ, ಇನ್ನೂ ಕೆಲವರು ಇದು ಮಾನವ ಹಕ್ಕುಗಳ ಉಲ್ಲಂಘನೆ ಎಂದು ವಾದಿಸಿದ್ದಾರೆ.
ಸರ್ಕಾರವು ತನ್ನ ಕ್ರಮಗಳನ್ನು ಸಮರ್ಥಿಸಿಕೊಂಡಿದೆ. “ನಾವು ಕಾನೂನುಬಾಹಿರ ಚಟುವಟಿಕೆಗಳನ್ನು ಸಹಿಸುವುದಿಲ್ಲ. ನಮ್ಮ ದೇಶಕ್ಕೆ ಬರುವ ಪ್ರತಿಯೊಬ್ಬರೂ ಕಾನೂನು ಮತ್ತು ನಿಯಮಗಳನ್ನು ಪಾಲಿಸಬೇಕು” ಎಂದು ಗೃಹ ಕಾರ್ಯದರ್ಶಿ ಹೇಳಿದ್ದಾರೆ. ಮುಂದಿನ ವಾರಗಳಲ್ಲಿಯೇ ಹೊಸ ಕಾನೂನು ಪ್ರಸ್ತಾಪಿಸಿ, ವಲಸೆ ನಿಯಂತ್ರಣ ಮತ್ತಷ್ಟು ಬಿಗಿಗೊಳಿಸುವ ಸಾಧ್ಯತೆ ಇದೆ.
