ಮುಂಬೈ: ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನದ ಶೌಚಾಲಯದ ಲೈಟ್ ಪ್ಯಾನೆಲ್ನಲ್ಲಿ ಬಚ್ಚಿಟ್ಟು 2.10 ಕೋಟಿ ರೂಪಾಯಿ ಮೌಲ್ಯದ 3 ಕೆಜಿ ಚಿನ್ನವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದ ಮೇಲೆ ಕರ್ನಾಟಕದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.
ಕರ್ನಾಟಕದ ಭಟ್ಕಳ ಜಿಲ್ಲೆಯ ಇನಾಮುಲ್ ಹಸನ್ ಎಂಬ ವ್ಯಕ್ತಿಯನ್ನು ಚಿನ್ನ ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಮೇಲೆ ಬಂಧಿಸಲಾಗಿದೆ. ವಿಮಾನ ನಿಲ್ದಾಣದ ಕಸ್ಟಮ್ಸ್ ಇಲಾಖೆಯ ವಾಯು ಗುಪ್ತಚರ ಘಟಕವು ನಡೆಸಿದ ಕಾರ್ಯಾಚರಣೆಯಲ್ಲಿ ಈತನನ್ನು ಬಂಧಿಸಲಾಗಿದೆ. ವಿಮಾನದ ಶೌಚಾಲಯದ ಪ್ಯಾನೆಲ್ನಲ್ಲಿ 2.10 ಕೋಟಿ ರೂಪಾಯಿ ಮೌಲ್ಯದ 3 ಕೆಜಿ ಚಿನ್ನವನ್ನು ಮರೆಮಾಚಿಟ್ಟಿದ್ದರು.
ವಿಚಾರಣೆ ವೇಳೆ, ಹಸನ್ ಈ ಕೆಲಸ ತಾನು ಚಿನ್ನ ಕಳ್ಳಸಾಗಣೆಯ ಮಾಫಿಯಾ ಪರವಾಗಿ ಮಾಡುತ್ತಿದ್ದುದಾಗಿ ಒಪ್ಪಿಕೊಂಡಿದ್ದಾನೆ. ಚಿನ್ನವನ್ನು ಅಡಗಿಸಿದ ಬಳಿಕ ಅದರ ಫೋಟೋ ಮಾಫಿಯಾ ಸಂಘಕ್ಕೆ ಕಳಿಸಿದ್ದಾನೆ. ಕಸ್ಟಮ್ಸ್ ಅಧಿಕಾರಿಗಳು ಈ ಪ್ರಕರಣವನ್ನು ಆಳವಾಗಿ ಪರಿಶೀಲಿಸುತ್ತಿದ್ದು, ಮಾಫಿಯಾದ ಇತರ ಸದಸ್ಯರ ಮೇಲೆ ನಿಗಾ ಇಟ್ಟಿದ್ದಾರೆ.