ದಕ್ಷಿಣ ಕೊರಿಯಾದ ಮುಅನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂದು ಸಂಭವಿಸಿದ ವಿಮಾನ ದುರಂತದಲ್ಲಿ 179 ಮಂದಿ ಮೃತಪಟ್ಟಿದ್ದಾರೆ. ಬ್ಯಾಂಕಾಕ್‌ನಿಂದ ಮುಅನ್‌ಗೆ ಬರುತ್ತಿದ್ದ ಜೆಜು ಏರ್‌ನ ಬೋಯಿಂಗ್ ವಿಮಾನವು ಲ್ಯಾಂಡಿಂಗ್ ವೇಳೆ ಹಕ್ಕಿ ಡಿಕ್ಕಿ ಹೊಡೆದ ಪರಿಣಾಮ ಹೈಡ್ರಾಲಿಕ್ ಮತ್ತು ಎಂಜಿನ್ ವೈಫಲ್ಯ ಸಂಭವಿಸಿದೆ.
ಈ ಅನಿರೀಕ್ಷಿತ ಘಟನೆಯಿಂದ ವಿಮಾನವು ನಿಯಂತ್ರಣ ಕಳೆದುಕೊಂಡು ಲ್ಯಾಂಡಿಂಗ್ ರನ್ ವೇಯಿಂದ ಜಾರಿ ಬಿದ್ದು ಕಾಂಕ್ರೀಟ್ ಗೋಡೆಯೊಂದಿಗೆ ಡಿಕ್ಕಿ ಹೊಡೆದು ಬೆಂಕಿ ಅವರಿತ್ತು. ವಿಮಾನದಲ್ಲಿದ್ದ 175 ಪ್ರಯಾಣಿಕರು ಮತ್ತು ಆರು ಸಿಬ್ಬಂದಿಗಳ ಪೈಕಿ ಇಬ್ಬರು ಸಿಬ್ಬಂದಿಗಳು ಮಾತ್ರ ಗಂಭೀರ ಸ್ಥಿತಿಯಲ್ಲಿ ಬದುಕುಳಿದಿದ್ದಾರೆ.
ಈ ಭೀಕರ ದುರಂತದ ನಂತರ, ದಕ್ಷಿಣ ಕೊರಿಯಾ ಸರ್ಕಾರ ಏಳು ದಿನಗಳ ರಾಷ್ಟ್ರೀಯ ಶೋಕವನ್ನು ಘೋಷಿಸಿದೆ. ಜೆಜು ಏರ್ ಸಂಸ್ಥೆಯು ಘಟನೆಯ ಕುರಿತು ಸಮಗ್ರ ತನಿಖೆ ನಡೆಸುವುದಾಗಿ ಭರವಸೆ ನೀಡಿ, ಮೃತರ ಕುಟುಂಬಗಳಿಗೆ ಸಂತಾಪ ಸೂಚಿಸಿದೆ. 2009ರಲ್ಲಿ ರೈನೇರ್‌ಗೆ ನೀಡಲ್ಪಟ್ಟಿದ್ದ ಈ ವಿಮಾನವು 2017ರಲ್ಲಿ ಜೆಜು ಏರ್‌ಗೆ ವರ್ಗಾಯಿಸಲ್ಪಟ್ಟಿತ್ತು. ಈ ದುರಂತವು 1997ರಿಂದಲೂ ದಕ್ಷಿಣ ಕೊರಿಯಾದಲ್ಲಿ ಸಂಭವಿಸಿದ ಅತಿ ದೊಡ್ಡ ವಿಮಾನ ದುರಂತವಾಗಿದೆ.
ಪ್ರಸ್ತುತ, ಘಟನೆಯ ಕುರಿತು ತನಿಖೆ ಮುಂದುವರಿದಿದ್ದು, ವಿಮಾನದ ಬ್ಲ್ಯಾಕ್ ಬಾಕ್ಸ್ ಅನ್ನು ಪತ್ತೆ ಮಾಡಲಾಗಿದೆ. ಹಕ್ಕಿಯ ಡಿಕ್ಕಿಯಿಂದ ಲ್ಯಾಂಡಿಂಗ್ ಗಿಯರ್ ವೈಫಲ್ಯ ಸಂಭವಿಸಿತೇ ಎಂಬುದರ ಮೇಲೆ ತನಿಖಾಧಿಕಾರಿಗಳು ಹೆಚ್ಚಿನ ಗಮನ ಹರಿಸುತ್ತಿದ್ದಾರೆ. ವಿಮಾನದಲ್ಲಿದ್ದ ಪ್ರಯಾಣಿಕರಲ್ಲಿ 173 ಮಂದಿ ದಕ್ಷಿಣ ಕೊರಿಯಾದವರು ಮತ್ತು ಇಬ್ಬರು ಥಾಯ್ಲ್ಯಾಂಡ್‌ನವರು.