ಮೂಡುಬಿದಿರೆ: ಕೆಲವು ದೇಶಗಳು ಆರ್ಥಿಕವಾಗಿ ಹಿಂದುಳಿಯಲು ಮಹಿಳಾ ಉದ್ಯೋಗಿಗಳ ಪ್ರಮಾಣ ಕಡಿಮೆ ಪ್ರಮುಖ ಕಾರಣವಾಗಿದೆ. ಯಾವುದೇ ದೇಶ ಅಥವಾ ಸಂಸ್ಥೆ ಉನ್ನತಿಯನ್ನು ಕಾಣಲು ಮಹಿಳೆಯರ ಪಾತ್ರ ಮುಖ್ಯ. ಮಹಿಳೆಯರು ವಿವಿಧ ವೃತ್ತಿರಂಗಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ದೇಶದ ಪ್ರಗತಿಗೆ ಕಾಣಿಕೆ ನೀಡಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಅಭಿಪ್ರಾಯಪಟ್ಟರು.
ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಗುರುವಾರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮಹಿಳಾ ಘಟಕ ‘ಸಕ್ಷಮಾ’ದ ವತಿಯಿಂದ ಮಹಿಳಾ ಮಾನಸಿಕ ಆರೋಗ್ಯದ ಜಾಗೃತಿ ಕಾರ್ಯಕ್ರಮ ‘ಎಂಪವರ್‌ಹರ್’ ಉದ್ಘಾಟಿಸಿ ಮಾತನಾಡಿದ ಅವರು ಮಹಿಳೆಯರು ವಿವಿಧ ಸ್ತರದ ಉದ್ಯೋಗಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದನ್ನು ಪ್ರೋತ್ಸಾಹಿಸಿಸುವ ಸಮಾಜ ನಮ್ಮದಾಗಬೇಕು ಎಂದರು. ಆಳ್ವಾಸ್ ಸಂಸ್ಥೆಯ ಯಶಸ್ಸಿನಲ್ಲಿ ಮಹಿಳೆಯರ ಪಾತ್ರ ಅನನ್ಯ. ಮಹಿಳೆಯರು ತಮ್ಮ ಜವಾಬ್ದಾರಿಗಳನ್ನು ಶ್ರೇಷ್ಠತೆಯಿಂದ ನಿಭಾಯಿಸುವುದರಿಂದ ಸಂಸ್ಥೆಯ ಜೇಷ್ಠತೆ ಹೆಚ್ಚಿದೆ ಎಂದರು.
ಮಹಿಳೆಯರು ವೃತ್ತಿ ಜೀವನ ಹಾಗೂ ಕೌಟುಂಬಿಕ ಜೀವನದಲ್ಲಿ ಸಮತೋಲನ ಕಾಪಾಡಿಕೊಳ್ಳುವುದು ಬಹಳ ಅವಶ್ಯ. ಇತ್ತೀಚಿನ ದಿನಗಳಲ್ಲಿ ವಿಭಕ್ತ ಕುಟುಂಬಗಳು ಕೂಡ ಮಾನಸಿಕ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತಿವೆ ಎಂದರು.
ನAತರ ನಡೆದ ಉಪನ್ಯಾಸ ಕರ‍್ಯಕ್ರಮದಲ್ಲಿ ಉಡುಪಿಯ ಡಾ. ಪಿ ವಿ. ಬಾಳಿಗ ಮೆಮೋರಿಯಲ್ ಆಸ್ಪತ್ರೆಯ ಮನೋವೈದ್ಯ ಡಾ. ವಿರೂಪಾಕ್ಷ ದೇವರಮನೆ ವೃತ್ತಿ ಜೀವನದ ಸಮತೋಲನ ಮತ್ತು ವೃತ್ತಿ ಜೀವನದಲ್ಲಿ ಮಹಿಳೆಯರ ಮಾನಸಿಕ ಆರೋಗ್ಯದ ಮಹತ್ವದ ಕುರಿತು ಸಂಸ್ಥೆಯ ಮಹಿಳಾ ಉದ್ಯೋಗಿಗಳನ್ನು ಉದ್ದೇಶಿಸಿ ಮಾತನಾಡಿದರು. ಗೃಹಿಣಿಯರಿಗೆ ಮತ್ತು ಮಹಿಳಾ ಉದ್ಯೋಗಿಗಳಿಗೆ ಹೋಲಿಸಿದರೆ ಮಹಿಳಾ ಉದ್ಯೋಗಿಗಳು ಹೆಚ್ಚಿನ ಒತ್ತಡವನ್ನು ಅನುಭವಿಸುತ್ತಿರುತ್ತಾರೆ. ಮಹಿಳಾ ಉದ್ಯೋಗಿಗಳ ಮಾನಸಿಕ ಆರೋಗ್ಯವು ಸಂಸ್ಥೆಯ ಏಳಿಗೆಯ ಮೇಲೂ ಪರಿಣಾಮ ಬೀರಬಲ್ಲದು.
ಮಹಿಳೆಯರಿಗೆ ವೃತ್ತಿ ಜೀವನ ಮತ್ತು ಕೌಟುಂಬಿಕ ಜೀವನವನ್ನು ಜೊತೆಯಲ್ಲೇ ಸಂಭಾಳಿಸಲು ಕಷ್ಟವಾದಾಗ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬಿರುತ್ತದೆ. ನಾವು ವೃತ್ತಿಯನ್ನು ನಿರ್ವಹಿಸುವ ರೀತಿಯಲ್ಲಿ ನಮ್ಮ ಮಾನಸಿಕ ಆರೋಗ್ಯ ನಿರ್ಧಾರವಾಗುತ್ತದೆ. ನಾವು ಮಾಡುವ ಕೆಲಸವನ್ನು ಖುಷಿಯಿಂದ ನಿರ್ವಹಿಸಿದಾಗ ಮಾನಸಿಕ ಸಮಸ್ಯೆಗಳು ತಗ್ಗುತ್ತದೆ ಎಂದರು. ಸಿಟ್ಟು, ಬೇಸರ, ದ್ವೇಷ, ಅಸಹನೆ, ಕೀಳರಿಮೆಗಳಂತಹ ಭಾವನೆಗಳು ಮಾನಸಿಕ ಅನಾರೋಗ್ಯಕ್ಕೆ ಕಾರಣವಾಗುತ್ತದೆ.
ಭಾವನೆಗಳ ನಿಯಂತ್ರಣದಿAದ ಸಂತೋಷದಾಯಕ ಜೀವನ ಸಾಧ್ಯ. ನಮ್ಮ ಮುಖದಲ್ಲಿ ಚಿಂತೆಯ ಸುಕ್ಕು ಎಂದು ಮೂಡದಿರಲಿ. ಒತ್ತಡ ನಮ್ಮ ನಿರೀಕ್ಷೆಗಳ ಮತ್ತು ವಾಸ್ತವದ ನಡುವಿನ ವ್ಯತ್ಯಾಸವಾಗಿದೆ. ಒತ್ತಡ ಕಡಿಮೆಯಾದಾಗ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಶೇ.೯೮% ದುಗುಡಗಳು ನಿಜವಿರುವುದಿಲ್ಲ. ಆದರೆ ಮಿತವಾದ ಒತ್ತಡವು ವಾಸ್ತವವಾಗಿ ಕಾರ್ಯಕ್ಷಮತೆ ಮತ್ತು ದಕ್ಷತೆಯನ್ನು ಹೆಚ್ಚಿಸಬಲ್ಲದು ಎಂದರು.
ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನ ಮನೋವಿಜ್ಞಾನ ಉಪನ್ಯಾಸಕಿ ಸಾರ ಕ್ರಾಸ್ತ ವಿದ್ಯಾರ್ಥಿನಿಯರಲ್ಲಿ ಮಾನಸಿಕ ಯೋಗಕ್ಷೇಮದ ಕುರಿತು ಉಪನ್ಯಾಸ ನೀಡಿ ಕಲಿಕೆ, ಪರೀಕ್ಷೆ, ವೃತ್ತಿ ಜೀವನದ ಆಯ್ಕೆ, ಗೆಳೆತನ ಸಾಮಾಜಿಕ ಮಾಧ್ಯಮಗಳ ಪರಿಣಾಮ ವಿವರಿಸಿದರು. ಈಗಿನ ಯುವ ಜನಾಂಗ ಮತ್ತು ಹಿಂದಿನ ತಲೆಮಾರು ಹೀಗೆ ಭಿನ್ನವಾಗಿತ್ತು ಮತ್ತು ಇಂದಿನ ಸಮುದಾಯ ಎದುರಿಸತ್ತಿರುವ ತೊಂದರೆಗಳಾದ ಮೊಬೈಲ್ ಅವಲಂಬನೆ, ಸೃಜನಶೀಲತೆಯ ಕೊರತೆ, ತಮ್ಮನ್ನು ಸಮಾಜದಿಂದ ಪ್ರತ್ಯೇಕಿಸುವುದರ ಕುರಿತು ವಿವರಿಸಿದರು.
ಮಾನಸಿಕ ಆರೋಗ್ಯವನ್ನು ಹತೋಟಿಯಲ್ಲಿಟ್ಟುಕೊಳ್ಳಲು ಮೆದುಳಿಗೆ ನೀಡಬೇಕಾದ ವಿಶ್ರಾಂತಿ, ಲಘು ನಿದ್ದೆ, ಸಕರಾತ್ಮಕ ಚಿಂತನೆಗಳು ಅಗತ್ಯ ಎಂದರು.
ಕಾರ್ಯಕ್ರಮದಲ್ಲಿ ಸಕ್ಷಮ ಮಹಿಳಾ ಘಟಕದ ಮಾಸಿಕ ಇ-ಪೋಸ್ಟರ್- ‘ಶಿರೋಸ್’ ಬಿಡುಗಡೆ ಮಾಡಲಾಯಿತು.
ಆಳ್ವಾ ಫಾರ್ಮಸಿಯ ಮುಖ್ಯ ನಿರ್ವಾಹಕಿ ಡಾ. ಗ್ರೀಷ್ಮ ಆಳ್ವ, ಮೂಡಬಿದಿರೆಯ ಮಹಿಳಾ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷೆ ಶೋಭಾ ಹೆಗ್ಡೆ, ಸಕ್ಷಮಾ ಘಟಕದ ಅಧ್ಯಕ್ಷೆ ಡಾ. ಮುಕಾಂಬಿಕಾ ಮತ್ತಿತರರು ಇದ್ದರು. ಪದವಿ ಪೂರ್ವ ಕಾಲೇಜಿನ ಅಧ್ಯಾಪಕಿ ಮಲ್ಲಿಕಾ ಎಂ. ಆರ್ ನಿರೂಪಿಸಿದರು. ಆಳ್ವಾಸ್ ಅಲೈಡ್ ಹೆಲ್ತ್ ಸೈನ್ಸ್ ನ ಉಪ ಪ್ರಾಂಶುಪಾಲೆ ಶ್ರೀವನಿತಾ ವಂದಿಸಿದರು.